ವೆಂಕಟರಮಣನೆ ಬಾರೋ

ಶೇಷಾಚಲವಾಸನೆ ಬಾರೋ||

 || ಪ ||

ಪಂಕಜನಾಭ ಪರಮ ಪವಿತ್ರ

ಶಂಕರ ಮಿತ್ರನೇ ಬಾರೋ || 

|| ವೆಂಕಟರಮಣನೆ ಬಾರೋ ||

ಮುದ್ದು ಮುಖದ ಮಗುವೇ

ನಿನಗೆ ಮುದ್ದು ಕೊಡುವೆನು ಬಾರೋ ||

ನಿರ್ದಯವೇಕೋ ನಿನ್ನೊಳಗೆ ನಾನು

ಹೊಂದಿದ್ದೇನೊ ಬಾರೊ||

|| ವೆಂಕಟರಮಣನೆ ಬಾರೋ ||

ಮಂದರಗಿರಿಯನು ಎತ್ತಿದಾನಂದ

ಮೂರುತಿಯೇ ನೀ ಬಾರೋ ||

ನಂದನ ಕಂದ ಗೋವಿಂದ ಮುಕುಂದನೇ 

ಇಂದಿರೆಯರಸನೆ ಬಾರೋ ||

|| ವೆಂಕಟರಮಣನೆ ಬಾರೋ ||

ಕಾಮನಯ್ಯ ಕರುಣಾಳು

ಶಾಮಳವರ್ಣನೇ ಬಾರೋ ||

ಕೋಮಲಾಂಗ ಶ್ರೀ ಪುರಂದರ ವಿಠ್ಠಲನೇ

ಸ್ವಾಮಿ ರಾಮನೇ ಬಾರೋ || 

|| ವೆಂಕಟರಮಣನೆ ಬಾರೋ ||


***