ಗುರುವೇ ಗತಿಯೆನ್ನು ಮನವೇ ||
|| ಪ ||
ತತ್ತ್ವ ಗುರುವಿನ ಪದಕಿಂತ ಪೆರತೊಂದು ಘನವೇ |
ಕೇಳ್ ಪೆರತೊಂದು ಘನವೇ |
|| ಗುರುವೇ ||
ಮರವೆಯಿಂ ಮರುಳನಾಗಿರುವೆ ಮೂಳೆ ನರಮಾಂಸ ತನುವ ತಾನೆಂಬೋದು ತರವೇ |
ಅರಿಯದೆ ಹಿಂದೆ ನೊಂದಿರುವೆ |
ಮುಂದೆ ಕೊರತೆಯಿಲ್ಲದ ನಿಜಾನಂದದೊಳಿರುವೆ ಆನಂದದೊಳಿರುವೆ |
|| ಗುರುವೇ ||
ಧನಧಾನ್ಯ ಬಂಧು ಭಾಗ್ಯಗಳು | ನಿನ್ನ ಘನವ ನೀನರಿಯದ ಮಾಯಾಕಾರ್ಯಗಳು |
ಕೊನೆಗಾಣದಿರುವೋ ದುಃಖಗಳು |
ಅಲ್ಲಿ ಮನವಿಟ್ಟ ನರನಿಗೆ ಬಿಡದು ಕೋಳಗಳು
ಕೇಳ್ ಬಿಡದು ಬಂಧಗಳು |
|| ಗುರುವೇ ||
ತನ್ನ ತಾ ತಿಳಿವ ಸಾಹಸವ |
ಬಿಟ್ಟು ನೀನೆಂದು ದೃಶ್ಯವಾಗುವ ಬೀದಿ ಕಸವ |
ಧ್ಯಾನಿಸುತ್ತಿರುವೋ ಮಾನಸವ | ಬಿಟ್ಟು ನೀನೆಯಾದರೆ ಸೇವಿಸುವೆ ಸಿದ್ಧರಸವ |
ಶ್ರೀ ಗುರು ಸಿದ್ಧರಸವ |
|| ಗುರುವೇ ।।
ಕುರುಹಿಲ್ಲವದು ಶೂನ್ಯವಲ್ಲ |
ನಿತ್ಯ ನಿರತಿಶಯಾನಂದ ನುಡಿಯೋಳಗಿಲ್ಲ |
ಪರವಾದಿ ಇದನೇನ ಬಲ್ಲ |
ಅಲ್ಲಿ ಗುರು ಶಂಕರನ ಬಿಟ್ಟು ಪೆರತೆಂಬೋದಿಲ್ಲ |
ಕೇಳ್ ಪೆರತೆಂಬೋದಿಲ್ಲ |