ಆಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ||
|| ಪ ||
ವಿಚಾರವಿಲ್ಲದೆ ಪರರ ದೂಷಿಪುದಕ್ಕೆ
ಚಾಚಿಕೊಂಡಿರುವಂತ ನಾಲಿಗೆ ||
|| ಆಚಾರವಿಲ್ಲದ ನಾಲಿಗೆ ||
ಚಾಡಿ ಹೇಳಲು ಬೇಡ ನಾಲಿಗೆ
ನಿನ್ನ ಬೇಡಿಕೊಂಬುವೆನು ನಾಲಿಗೆ ||
ರೂಢಿಗೊಡೆಯ ಶ್ರೀ ರಾಮನ ನಾಮವ
ಪಾಡುತಲಿರು ಕಂಡ್ಯ ನಾಲಿಗೆ
|| ಆಚಾರವಿಲ್ಲದ ನಾಲಿಗೆ ||
ಪ್ರಾತಃಕಾಲದೊಳೆದ್ದು ನಾಲಿಗೆ
ಸಿರಿಪತಿ ಎನ್ನಬಾರದೆ ನಾಲಿಗೆ ||
ಪತಿತಪಾವನ ನಮ್ಮ ರತಿಪತಿ ಜನಕನ
ಸತತವು ನುಡಿಕಂಡ್ಯ ನಾಲಿಗೆ ||
|| ಆಚಾರವಿಲ್ಲದ ನಾಲಿಗೆ ||
ಹರಿಯ ಸ್ಮರಣೆ ಮಾಡೋ ನಾಲಿಗೆ
ನರಹರಿಯ ಭಜಿಸು ಕಂಡ್ಯ ನಾಲಿಗೆ ||
ವರದ ಪುರಂದರ ವಿಠಲರಾಯನ
ಚರಣಕಮಲ ನೆನೆ ನಾಲಿಗೆ ||