ಏತರ ಚೆಲುವ ರಂಗಯ್ಯ

ಹರಿ ಎಂಬ ಮಾತಿಗೆ ಮರುಳಾದೆನಲ್ಲದೆ ||

|| ಏತರ ಚೆಲುವ ||

ದೇಶಕೋಶಗಳುಳ್ಳೋಡೆ ತಾ

ಕ್ಷೀರ ವಾರಾಶಿಯೊಳಗೆ ಮನೆ ಕಟ್ಟುವನೇ ||

ಹಾಸುವುದಕೆ ಹಾಸಿಗೆಯುಳ್ಳೋಡೇ

ತಾ ಶೇಷನ ಬೆನ್ನಲ್ಲಿ ಮಲಗುವನೇ |

|| ಏತರ ಚೆಲುವ ||

ಬುದ್ಧಿಯ ಪೇಳುವ ಪಿತನುಳ್ಳೋಡೇ ಬೆಣ್ಣೆ 

ಕದ್ದು ಚೋರನೆಂದೆನಿಸುವನೇ ||

ಬದ್ಧ ವಾಹನ ತನಗಿದ್ದರೆ ಹಾರುವ

ಹದ್ದಿನ ಮೇಲೇರಿ ತಿರುಗುವನೇ |

|| ಏತರ ಚೆಲುವ ||

ಮದನಜನಕ ತಾನು ಸೊಬಗುಳ್ಳನಾದರೆ

ಮುದುಕಿ ಕುಬುಜೆಯನು ಕೂಡುವನೇ ||

ಮತಿವಂತ ಪುರಂದರ ವಿಠಲರಾಯನು

ಪತಿತ ಪಾವನನೆಂದು ಸ್ತುತಿಸಿದೆನಲ್ಲದೆ |

|| ಏತರ ಚೆಲುವ || 

***