ಎಂಥಾ ಚೆಲುವಗೆ ಮಗಳನು ಕೊಟ್ಟನು

ಗಿರಿರಾಜನು ನೋಡಮ್ಮಮ್ಮ   |

ಕಂಬುಹರ ಶಿವ ಚೆಲುವನೆನ್ನುತ 

ಮೆಚ್ಚಿದನು ನೋಡಮ್ಮಮ್ಮ  || ||ಪ||

ಮೋರೆ ಐದು ಮೂರು ಕಂಗಳು  

ವಿಪರೀತವ ನೋಡಮ್ಮಮ್ಮ  ||

ಕೊರಳೊಳು ರುಂಡಮಾಲೆ ಧರಿಸಿದ  

ಉರಗ ಭೂಷಣನ ನೋಡಮ್ಮಮ್ಮ  ||

||ಎಂಥಾ ಚೆಲುವಗೆ||

ತಲೆಯೊಂಬೋದು ನೋಡಿದರೆ  |

ಜಟೆ ಹೊಳೆಯುತಿದೆ ನೋಡಮ್ಮಮ್ಮ   ||

ಹಲವು ಕಾಲದ ತಪಸ್ವಿ ರುದ್ರನ  |

ಮೈ ಬೂದಿಯ ನೋಡಮ್ಮಮ್ಮ  ||

||ಎಂಥಾ ಚೆಲುವಗೆ||

ಮನೆಯೆಂಬುದು ಸ್ಮಶಾನವು ನೋಡೆ  |

ಗಜಚರ್ಮಾಂಬರವಮ್ಮಮ್ಮ  ||

ಹಣವೊಂದಾದರು ಕೈಯೊಳಗಿಲ್ಲ  |

ಕಪ್ಪರವನು ನೋಡಮ್ಮಮ್ಮ  ||

||ಎಂಥಾ ಚೆಲುವಗೆ||

ನಂದಿವಾಹನ ನೀಲಕಂಠನ  |

ನಿರ್ಗುಣನ ನೋಡಮ್ಮಮ್ಮ  ||

ಇಂದಿರಾರಮಣ ಶ್ರೀ ಪುರಂದರ ವಿಠಲನ |

ಹೊಂದಿದವನ ನೋಡಮ್ಮಮ್ಮ  ||

||ಎಂಥಾ ಚೆಲುವಗೆ||