ಕೂಸಿನ ಕಂಡೀರ್ಯಾ
ಮುಖ್ಯಪ್ರಾಣನ ಕಂಡೀರ್ಯಾ ||
||ಪ||
ಅಂಜನೆಯುದರದಿ ಪುಟ್ಟಿತು ಕೂಸು
ರಾಮನ ಚರಣಕೆ ಎರಗಿತು ಕೂಸು ||
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನೆ ಸುಟ್ಟಿತು ಕೂಸು ||
|| ಕೂಸಿನ ||
ಬಂಡಿ ಅನ್ನವನುಂಡಿತು ಕೂಸು
ಬಕನ ಪ್ರಾಣವ ಕೊಂದಿತು ಕೂಸು ||
ವಿಷದ ಲಡ್ಡುಗೆ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು ||
|| ಕೂಸಿನ ||
ಮಾಯಾವಾದಿಗಳ ಗೆದ್ದಿತು ಕೂಸು
ದ್ವೈತಮತವನುದ್ಧರಿಸಿತು ಕೂಸು ||
ಮಧ್ವರಾಯರೆಂಬ ಪೆಸರಿನ ಕೂಸು
ಪುರಂದರವಿಠಲನ ಪ್ರೇಮದ ಕೂಸು ||
|| ಕೂಸಿನ ||
***