ಹ್ಯಾಂಗೆ ಮಾಡಲಯ್ಯ ಕೃಷ್ಣ
ಪೋಗುತಿದೆ ಆಯುಷ್ಯ ||
ಮಂಗಳಾಂಗ ಭವಭಂಗ ಬಿಡಿಸಿ
ನಿನ್ನ ಡಿಂಗರಿಗನ ಮಾಡೋ ಅನಂಗಜನಕ |
|| ಹ್ಯಾಂಗೆ ಮಾಡಲಯ್ಯ ||
ಏಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿ
ಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿ ||
ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ ||
ಲೇಸ ಸಾಧನವ ಕಾಣದೆ ದುಸ್ಸಹವಾಸದಿಂದಲೇ ದಿನದಿನ ಕಳೆದೇ |
|| ಹ್ಯಾಂಗೆ ಮಾಡಲಯ್ಯ ||
ಶಶಿಮುಖ ಕನಕದ ಆಸೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ ||
ನಿಶೆಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ ||
ಕುಸುರಿದೆನೆಲವೋ ಸರ್ವಕಾಲ ನಿನ್ನೊಡೆತನವೆಂಬುವ ಬಗೆಯನು ಅರಿಯದೆ |
|| ಹ್ಯಾಂಗೆ ಮಾಡಲಯ್ಯ ||
ನೆರೆ ನಂಬಿದ ಪಾವಟಿಗಳು ಎಲ್ಲ ಸರಿದು ಹೋದವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯಂತು ಇಲ್ಲ ||
ಪರಿಪರಿ ವಿಷಯದ ಆಸೆಯು ಎನಗೆ ಹಿರಿದು ಆಯಿತಲ್ಲ ||
ಹರಿಯೇ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ |
|| ಹ್ಯಾಂಗೆ ಮಾಡಲಯ್ಯ ||
ಅವನಿಯೊಳಗೆ ಪುಣ್ಯಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲ
ಪವನಾತ್ಮಕ ಗುರುಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲ ||
ತವಕದಿಂದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ ||
ರವಿನಂದನ ಕೇಳಿದರುತ್ತರ ಕೊಡೆ ವಿವರಸರಕು ಒಂದಾದರಿಲ್ಲ |
|| ಹ್ಯಾಂಗೆ ಮಾಡಲಯ್ಯ ||
ಭಾಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳ್ದ ಹರಿಕಥೆ ಸಂಯೋಗವೆಂಬುದಿಲ್ಲ ||
ನೀಗುವಂತ ಭವಭಯವ ಭಕುತಿ ವೈರಾಗ್ಯವೆಂಬುದಿಲ್ಲ ||
ಯೋಗಿವಂದ್ಯ ಗೋಪಾಲವಿಠ್ಠಲ ತಲೆಬಾಗಿ ನಿನ್ನನೇ ಬೇಡಿಕೊಂಬೇ |