ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ
ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ||
ಕೊಳಲನೂದುವಾ ಕೃಷ್ಣ ಕೊಳಲನೂದುವ ||
|| ಬಾರೆ ಸಖಿ ||
ಜಾರನೆಂದು ಸಣ್ಣಮಾತನಾಡಿದಾಯಿತು
ಚೋರನೆಂದು ಬಹಳ ದೂರು ಮಾಡಿದಾಯಿತು || ಮೂರು ನಿಮಿಷ ಅವನ ಮರೆಯಲಾಗದಾಯಿತು ||
ಬೀರುತಿರುವ ಮೋಹಜಾಲ ಸಡಲದಾಯಿತು ||
||ಬಾರೆ ಸಖಿ||
ಯಾವನೀತನೆಂದು ಚಿಂತೆ ಮಾಡಿದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ||
ಯಾವನಾದರೇನು ಇವನ ಕ್ಷಣವು ಕಾಣದೆ ||
ಜೀವನ ಕಳೆಯುವುದೆ ದೊಡ್ಡ ಭಾರವಾಯಿತು ||
||ಬಾರೆ ಸಖಿ||
ಮಂದಹಾಸದಿಂದ ಸಕಲ ಜಗವ ಬೆಳಗುವ
ಚಂದ್ರನು ತಾನಿವನ ನೋಡಿ ಬಹಳ ನಾಚುವ || ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ||
ಮಂದಮಲಯ ಮಾರುತ ತಾ ತಲೆಯನಾಡುವ ||
||ಬಾರೆ ಸಖಿ||
ನಾದದ ಸುಧೆ ಸಾಗರದಲಿ ತೇಲುವಂತಿದೆ
ಮಾಧವ ತಾ ಸುಧೆಯ ರಸವನೆರಚುವಂತಿದೆ ||
ಬಾಧಿಸುತಿಹ ಭವದ ತಾಪವಡಗಿದಂತಿದೆ ||
ಮಾದರಿಫಲ ರಾಸಕ್ರೀಡೆ ತೋರುವಂತಿದೆ ||
|| ಬಾರೆ ಸಖಿ||
ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು | ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು || ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು ||
||ಬಾರೆ ಸಖಿ ||
***