ಎಷ್ಟು ಬಾರಿ ಮೊರೆ ಇಡಲಿ ಶಂಭೋ ಶಂಕರ

ಕಷ್ಟಗಳ ನೀಗಿಸು ಬಾ ಹೇ ಮಹೇಶ್ವರ ||

|| ಪ ||

ಅಜ್ಞಾನದ ಅಂದಕಾರ ಮನಕೆ ಸುತ್ತಿದೆ

ಮುಂದೇ ದಾರಿ ಕಾಣದಿದೆ ಭಯವು ಮುತ್ತಿದೆ |

ಪಾಪಗಳ ಹೊರೆಯನ್ನು ಹೊರಲಾರದೆ

ಭವಬಂಧದ ಜಾಲದಿಂದ ಬರಲಾರದೆ |

ತತ್ತರಿಸಿಹೆ ನೊಂದುಬೆಂದು ನಿಂದಿರುವೆನು

ನಿನ್ನೊಲುಮೆಯ ಸುಧೆ ಹರಿಸಿ‌ ಕಾಪಾಡು ದೇವಾ |

|| ಎಷ್ಟು ಬಾರಿ ಮೊರೆಯಿಡಲಿ ||

ಪಶ್ಚಾತಾಪವೆಂಬ ಬೆಂಕಿ ಸುಡುತಿದೆ ನನ್ನ |

ಮಲಿನ ಕಳೆದು ಆಗಲಿ ಮನ ಪುಟವಿಟ್ಟ ಚಿನ್ನ |

ಕಂಬನಿಯಲಿ ಪಾದ ತೊಳೆವ ಆಸೆಯಾಗಿದೆ|

ನಿಂತಿರುವೆನು ಮೌನದಲ್ಲಿ ಮಾತು ಬಾರದೆ |

ಕರುಣಿಸಿ ಪ್ರಭು  ನೀ ಮನ ನೆಮ್ಮದಿ ತಾರಾ |

ಕೈ ಹಿಡಿದು ನಡೆಸೆನ್ನ ಹೇ ದೀನಬಂಧೂ |

|| ಎಷ್ಟು ಬಾರಿ ಮೊರೆಯಿಡಲಿ ||

ಆತ್ಮವೆನುವ ಪ್ರಣವದಿಂದ ಆರಾಧಿಸುವೆ |

ಉಚ್ವಾಸ ನಿಶ್ವಾಸದಿ ಕೀರ್ತಿ ಹಾಡುವೆ |

ಪ್ರಾಣ ಜ್ಯೋತಿ ದೀಪದಿಂದ ಆರತಿಗೈವೇ |

ಭಕ್ತ ಕುಸುಮ ತವ ಪಾದಕೆ ಅರ್ಚನೆಗೈವೇ 

ಮುಕ್ತಿದಾರಿ ತೋರೋ ಹೇ ಕರುಣಾಮಯನೇ

ತವಪಾದ ಪೂಜೆ ನೀಡೋ ಪಾವನಾಂಗನೇ 

|| ಎಷ್ಟು ಬಾರಿ ಮೊರೆಯಿಡಲಿ ||


***