ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ||
ಕೂಗಿದರು ಧ್ವನಿಯು ಕೇಳಿಸಲೊಲ್ಲದೆ |
|| ಬಾಗಿಲನು ತೆರೆದು ||
ಪರಮಪದದೊಳಗೆ ವಿಷಚರನ ತಲ್ಪದಲಿ
ಸಿರಿಸಹಿತ ಕ್ಷೀರವಾರಿಧಿಯೊಳಿರಲು ||
ಕರಿರಾಜ ಕಷ್ಟದಲಿ ಆದಿಮೂಲ ಎಂದು ||
ಕರೆಯಲಾಕ್ಷಣ ಬಂದು ಪೊರೆದೆ ನರಹರಿಯೆ ||
|| ಬಾಗಿಲನು ತೆರೆದು ||
ಕಡುಕೋಪದಿಂ ಖಳನು ಖಡ್ಗವನೆ ಪಿಡಿದು
ನಿನ್ನೊಡೆಯ ಎಲ್ಲಿಹನೆಂದು ಕಂಭವೊಡೆಯೆ ||
ಧೃಢಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ ||
ಸಡಗರದಿ ಕಂಭದಿಂದೊಡೆದ ನರಹರಿಯೆ |
|| ಬಾಗಿಲನು ತೆರೆದು ||
ಯಮಸುತನ ರಾಣಿಗಕ್ಷಯ ವಸನವನಿತ್ತೆ
ಸಮಯದಲಿ ಅಜಮಿಳನ ದಯದಿ ಪೊರೆದೆ ||
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ ||
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ |
|| ಬಾಗಿಲನು ತೆರೆದು ||
***