ವಾರಿಜನಯಪತೆ ವಾರಿಜನಾಭನೆ

ವಾರಿಜಭವಪಿತ ವಾರಿಜನೇತ್ರನೆ 

ವಾರಿಜಮಿತ್ರ ಅಪಾರಪ್ರಭಾವನೆ 

ವಾರಿಜಜಾಂಡದ ಕಾರಣ ದೊರೆಯೇ |


ಬಾರಯ್ಯ ಬಾ ಬಾ ಬಾ ಬಾಬಾ 

ಭಕುತರ ಪ್ರಿಯ ಶ್ರೀನಿವಾಸ ರಾಯ||

|| ಪ ||

ಮಾರಜನಕ ಮುಕುತರೊಡೆಯ

ದೇವಯ್ಯ ಜೀಯ |

ಬಾರಯ್ಯ ಬಾಬಾ ಬಾಬಾ ಬಾಬಾ ಬಾಬಾ ಬಾ

ಭಕುತರ ಪ್ರಿಯ ಶ್ರೀನಿವಾಸ ರಾಯ ||

||

ಸ್ಯಂದನವೇರಿ ಬಾಪ್ಪ  ರಂಗ  ದೇವೋತ್ತುಂಗ 

ನಂದಾನಂದನ ಅರಿಮದಭಂಗ ಕರುಣಾಪಾಂಗ

ಸಿಂಧೂಶಯನ  ಸುಂದರಾಂಗ ಹೇ ನಾರಸಿಂಗ

ಕಂದ ವಿರಂಚಿಯು ನಂದಿವಾಹನ ಅಮರೇಂದ್ರ ಸನಕ 

ಸನಂದನಾದಿ ಮುನಿ ವೃಂದನಿಂದು ಬಂದು  

ದಿಂ ದಿಂ ದಿಮಿಕೆಂದು ನಿಂದಾಡಲು ಆನಂದದಿ ಮನಕೆ 

|| ಬಾರಯ್ಯ ಬಾಬಾ ||

ಜಗತ್ ಜನ್ಮಾದಿಕರ್ತ ಗೋವಿಂದಾ

ಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದ

ಭಕ್ತರ ಮನಕೆ ಜಗಜಗಿಸುತ ಪೊಳೆವಾನಂದಾ ನಿಗಮಾವಳಿಯಿಂದ |

ಅಗಣಿತ ಮುನಿಗಳು ನಗ ಖಗ ಮೃಗ ಶಶಿ ಗಗನ ಮನ್ಯಾಧ್ಯರು 

ಸೊಗಸಾಗಿ ಬಗೆಬಗೆ ಪೊಗಳುತಲಿ ಬೇಗ ಜಿಗಿಜಿಗಿದಾಡಲು

ಮುಗುಳುನಗೆಯ ಮಹಾ ಉರಗಗಿರಿ ವಾಸ

|| ಬಾರಯ್ಯ ಬಾಬಾ ||

ತಡ ಮಾಡಬ್ಯಾಡವೋ ಹೇ ನಲ್ಲ

ವಾಕು ಲಾಲಿಸೆನ್ನೊಡೆಯ ಗೋಪಾಲವಿಠಲ 

ದೇವಪರಾಕು ಅಡಿಯಿಡು ಭಕ್ತವತ್ಸಲ ಶ್ರೀಲಕುಮಿ ನಲ್ಲ

ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ ಮಡದಿಗೆ ಹೇಳದೆ 

ದುಡುದುಡನೇ ಬಂದು ಹಿಡಿದು ನಕ್ರನ ಬಾಯ

ಕಡಿದು ಬಿಡಿಸಿದನೆ ಸಡಗರದಲಿ ರಮೆ ಪೊಡವಿಯೊಡಗೂಡಿ

|| ಬಾರಯ್ಯ ಬಾಬಾ ||

***