ಚಂದ್ರಚೂಡ ಶಿವ ಶಂಕರ ಪಾರ್ವತಿ
ರಮಣಾ ನಿನಗೆ ನಮೋ ನಮೋ ||
|| ಪ ||
ಸುಂದರಮೃಗಧರ ಪಿನಾಕ ಧನುಕರ
ಗಂಗಾಶಿರ ಗಜಚರ್ಮಾಂಬರಧರ ||
|| ಚಂದ್ರಚೂಡ ಶಿವ ||
ನಂದಿವಾಹನ ನಂದದಿಂದ ಮೂರ್ಜಗದಿ
ಮೆರೆವನು ನೀನೇ ||
ಅಂದು ಅಮೃತಘಟದಿಂದುದಿಸಿದ ವಿಷ
ತಂದು ಭುಜಿಸಿದವ ನೀನೇ ||
ಕಂದರ್ಪನ ಕ್ರೋಧದಿಂದ ಕಣ್ತೆರೆದು
ಕೊಂದ ಉಗ್ರನು ನೀನೇ ||
ಇಂದಿರೇಶ ಶ್ರೀರಾಮನ ಪಾದವ
ಚಂದದಿ ಪೊಗಳುವ ನೀನೇ ||
|| ಚಂದ್ರಚೂಡ ಶಿವ ||
ಧರೆಗೆ ದಕ್ಷಿಣ ಕಾವೇರಿತೀರ
ಕುಂಭಪುರವಾಸನು ನೀನೇ ||
ಕರದಲಿ ವೀಣೆಯ ನುಡಿಸುವ ನಮ್ಮ
ಉರಗ ಭೂಷಣನು ನೀನೇ ||
ಕೊರಳೊಳು ಭಸ್ಮ ರುದ್ರಾಕ್ಷಿಯ ಧರಿಸಿದ
ಪರಮ ವೈಷ್ಣವನು ನೀನೇ ||
ಗರುಡ ಗಮನ ನಮ್ಮ ಪುರಂದರ ವಿಠಲಗೆ
ಪ್ರಾಣ ಪ್ರಿಯನು ನೀನೇ||
|| ಚಂದ್ರಚೂಡ ಶಿವ ||