ಗುಮ್ಮನ ಕರೆಯದಿರೆ

ಅಮ್ಮಾ ನೀನು ಗುಮ್ಮನ ಕರೆಯದಿರೆ ||

|| ಪ ||

ಸುಮ್ಮನೆ  ಇದ್ದೇನು ಅಮ್ಮಿಯ ಬೇಡೆನು

ಮಮ್ಮು ಉಣ್ಣುತೇನೇ ಅಮ್ಮ ಅಳುವುದಿಲ್ಲ || 

|| ಗುಮ್ಮನ ||

ಹೆಣ್ಣುಗಳಿರುವಲ್ಲಿಗೆ ಪೋಗಿ ಅವರ ಕಣ್ಣು ಮುಚ್ಚುವದಿಲ್ಲವೇ ||

ಚಿನ್ನರ ಬಡಿಯೆನು ಅಣ್ಣನ ಬೈಯೆನು ||

ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ ||

|| ಗುಮ್ಮನ ||

ಬಾವಿಗೆ ಪೋಗೇ ಕಾಣೆ ಅಮ್ಮಾ ನಾನು ಹಾವಿನೋಳಾಡೇ ಕಾಣೆ ||

ಆವಿನ ಮೊಲೆಯೂಡೇ ಕರುಗಳ ಬಿಡೆ ನೋಡೇ ||

ದೇವರಂತೇ ಬಂದು ಠಾವಿಲಿ ಕೂಡುವೇ ||

|| ಗುಮ್ಮನ ||

ಮಗನ ಮಾತನು ಕೇಳುತ ಗೋಪೀದೇವಿ ಮುಗುಳುನಗೆಯ ನಗುತಾ ||

ಜಗದೊಡೆಯ ಶ್ರೀ ಪುರಂದರ ವಿಠಲನ ||

ಬಿಗಿದಪ್ಪಿಕೊಂಡಳು ಮೋಹದಿಂದಲಾಗ ||

|| ಗುಮ್ಮನ ||