ನೀ ತಂದೆ ನಾ ಕಂದ ,

ಇದು ನಮ್ಮ ಅನುಬಂಧ

ಬೇರೇನು ನಾ ಅರಿಯೆನು

ನಿನ್ನಾಣೆ ನಿಜವನ್ನೆ ನಾ ನುಡಿವೆನು |

|| ಪ ||

ನೀ ತಂದೆ ನಾ ಬಂದೆ ನಡೆಸಿದಂತೇ ನಡೆದೆ

ಕಲಿಸಿದ ಮಾತು ಕಲಿತೆ

ಗುರುರಾಯ ಇನ್ನೇಕೆ ನನಗೆ ಚಿಂತೆ |

|| ನೀ ತಂದೆ ||

ಎಡವಿದರು ನೀನಿರುವೆ, ತೊದಲಿದರು ನೀನಿರುವೆ

ನಿನ್ನದೆ ಎಲ್ಲ ಎನುವೆ 

ಗುರುರಾಯ ನನ್ನದೇನಿಲ್ಲ ಎನುವೆ ||

ನಗಿಸಿದರೆ ನಾ ನಗುವೆ, ಅಳಿಸಿದರೆ ನಾ ಅಳುವೆ

ಕಾರಣ ನಾ ಕೇಳೆನು |

ಗುರುರಾಯ ಬಲ್ಲೆ ನೀನೆಲ್ಲವನ್ನು ||

ನೋವಿನಲೆ ಮುಳುಗಿರಲಿ, ಕಣ್ಣೀರು ಕಲೆತಿರಲಿ

ಕಾಪಾಡು ಬಾ ಎನ್ನೆನು

ಕಂದನ ತಂದೆಯು ಮರೆವನೇನು |

|| ನೀ ತಂದೆ ||

ಬಿಸಿಲಲ್ಲಿ ನೆರಳಲ್ಲಿ , ಹಗಲಲ್ಲಿ ಇರುಳಲ್ಲಿ

ಗುರುರಾಘವೇಂದ್ರ ಎನುವೆ

ಆ ಕ್ಷಣವೆ ಆನಂದವಾ ಹೊಂದುವೆ ||

ಎಲ್ಲಿರಲಿ ಹೇಗಿರಲಿ ದೂರದಲೆ ನಾನಿರಲಿ

ಭಯವನ್ನೆ ನಾ ಕಾಣೆನು |

 ಗುರುರಾಯ ರಕ್ಷಣೆಗೆ ಇರಲು ನೀನು  ||

ನೀ ಬಂದು ನಿಂತರೂ ವರವ ಕೇಳೆಂದರು

ಏನೊಂದನೂ  ಬೇಡೆನು 

ಗುರುರಾಯ ಕೊಡುವೆ ನೀನೆಲ್ಲವನ್ನು ||

ಹೂವಿನಾ ಹೃದಯದಲಿ  ಪರಿಮಳವು ಬೆರೆತಂತೆ

ನನ್ನೆದೆಯ ಗುಡಿಯಲ್ಲಿಯೆ | 

ನೀನಿರಲು ಚಿಂತೆಯ ಮಾತೆಲ್ಲಿದೆ ||

ನೀ ತಂದೆ ನಾ ಕಂದ,ಇದು ನಮ್ಮ ಅನುಬಂಧ

ಬೇರೆನು ನಾ ಅರಿಯೆನು | ಗುರುರಾಯ ನಿಜವನ್ನೆ ನಾ ನುಡಿವೆನು |

ಬೇರೇನು ನಾ ಅರಿಯೆನು

ನಿನ್ನಾಣೆ ನಿಜವನ್ನೆ ನಾ ನುಡಿವೆನು | 

**