ಬಂದು ನೋಡಿರೋ ಶ್ರೀ ಸುಬ್ರಹ್ಮಣ್ಯನ

ನಂಬಿದವರ ಪೊರೆವನ ಸುರಾಗ್ರಗಣ್ಯನ ||

||ಬಂದು||

ಶೂರಪದ್ಮ ತಾರಕಾಸುರ ಮಥನ ನಿಪುಣನ

ಸಾರಧಾರಾ ತೀರ್ಥತಟ ವಿಹಾರನಿರತನ ||

ನೀರಜಾಸನ ಮಾರವೈರಿ ಶೌರಿಜಾತನ ||

ನಾರಸಿಂಹನ ಧ್ಯಾನಿಸುತಲಿ ಮುದದಲಿರ್ಪನ 

||ಬಂದು||

ಅನ್ನದಾತ ಭಾಗ್ಯಧಾತನೆಂದು ಖ್ಯಾತನ

ಅನ್ಯವಾರ್ತೆಗೆರಗದಂತೆ ಮನವ ಮಾಳ್ಪನ ||

ಉನ್ನತದ ಕುಕ್ಕೆಪುರದಿ ಮುದದಿ ನಿಂದನಾ ||

ಘನ್ನಮಹಿಮ ವಾಸುಕಿಪ್ರಿಯ ಶೇಷಸಹಿತನ |

 ||ಬಂದು||

ವಿಭುವಿಗೊಲಿದ ವಿಭುದವಂದ್ಯ ಮದನರೂಪನ

ಶುಭವ ಜನಕೆ ಕರೆದು ಕೊಡುವುದಾರ ಚರಿತನ ||

ವಿಭವದನನ ಕೂಡೆ ನಿತ್ಯಪೂಜೆಗೊಂಬನ ||

ಅಭಯವರದನಾದ ನಮ್ಮ ಸ್ಕಂದನ ವಂದ್ಯನ

 ||ಬಂದು ||

***