ಕೈಲಾಸವಾಸ ಗೌರೀಶ ಈಶ ||
ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ ಶಂಭೋ
|| ಕೈಲಾಸ ವಾಸ||
ಅಹೋರಾತ್ರಿಯಲಿ ನಾನು
ಅನುಚರಾಗ್ರಾಣಿಯಾಗಿ
ಮಹಿಯೊಳಗೆ ಚರಿಸಿದೆನು ಮಹಾದೇವನೆ||
ಅಹಿಭೂಷಣನೆ ಎನ್ನ ಅವಗುಣಗಳ ನೆನೆಸದನೆ
ವಿಹಿತ ಧರ್ಮದಲಿ ವಿಷ್ಣು ಭಕುತಿಯನು ಕೊಡೊ ಈಶ ||
|| ಕೈಲಾಸ ವಾಸ ||
ಮನಸು ಕಾರಣವಲ್ಲ ಪಾಪ ಪುಣ್ಯಕೆಲ್ಲ |||
ಅನಲಾಕ್ಷ ನಿನ್ನ ಪ್ರೇರಣೆ ಇಲ್ಲದೇ
ದನುಜಗಜ ಮದಹಾರಿ ದಂಡಪ್ರಣಾಮವಮಾಳ್ಪೆ
ಮಣಿಸೋ ಈ ಶಿರವ ಸಜ್ಜನರ ಸಿರಿ ಚರಣದಲಿ
|| ಕೈಲಾಸವಾಸ ||
ಭಾಗೀರಥೀಧರನೇ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಶರ್ವ ದೇವಾ
ಭಾಗವತ ಜನಪ್ರೀಯ ವಿಜಯ ವಿಟ್ಠಲನಂಘ್ರಿ
ಸಾಕು ಮಾಡದೆ ಭಜಿಪ ಭಾಗ್ಯವನು ಕೊಡೊ ಶಂಭೋ ||
|| ಕೈಲಾಸವಾಸ||