ಮರುಳು ಮಾಡಿಕೊಂಡೆಯಲ್ಲೆ ಮಾಯಾದೇವಿಯೆ ||
ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ ||
|| ಪ ||
ಜ್ಞಾನಿಗಳು ನಿತ್ಯ ಅನ್ನ ಪಾನಾದಿಗಳನ್ನು ಬಿಟ್ಟು ||
ನಾನಾ ವಿಧ ತಪದಲಿದ್ದರು ಧ್ಯಾನಕೆ ಸಿಲುಕದವನ ||
|| ಮರುಳು ||
ರಂಗನು ಭೂಲೋಕದಿ ಭುಜಂಗ ಗಿರಿಯೊಳಲಮೇಲು ||
ಮನ್ಗಪತಿಯಾಗಿ ನಿನ್ನ ಅಂಗೀಕರಿಸುವಂತೆ ||
||ಮರುಳು ||
ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ ||
ಹಲವು ಆಭರಣಗಳು ಜಲವು ಆಗಿ ಜಾಣತನದಿ ||
|| ಮರುಳು ||
ಸರ್ವ ಸಂಗ ಬಿಟ್ಟು ಸನ್ಯಾಸಿಯಾದ ಕಾಲಕ್ಕು ||
ಸರ್ವದ ತನ್ನೆದೆಯಮೇಲೇ ಬಿಡದೆ ನಿನ್ನ ಧರಿಸಿಪ್ಪಂತೆ ||
|| ಮರುಳು ||
ಎಡಕೆ ಭೂಮಿ ಬಲಕೆ ಶ್ರೀಯು ಎದುರಿನಲ್ಲಿ ದುರ್ಗಾದೇವಿ ||
ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಪಂತೆ ||
|| ಮರುಳು ||
ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು ||
ಹೊಕ್ಕುಳೊಲು ಮಕ್ಕಳ ಪಡೆದು ಕಕ್ಕುಲಾತಿ ಪಡೆವಂತೆ ||
|| ಮರುಳು ||
ಎಂದೆಂದಿಗೂ ಮರೆಯೆ ನಿನ್ನಾನಂದದಿ ಜನರಿಗೆಲ್ಲ
ತಂದು ತೋರೆ ಸ್ವಾಧೀನ ಪುರಂದರ ವಿಟ್ಠಲರಾಯನ
|| ಮರುಳು ||
***