ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲಾ ಮನಕೆ ||
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ
ಶ್ರೀಮನ್ ನಾರಾಯಣ ಜಗಕೆ ||
|| ಪ ||
ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ ||
ಬೆಟ್ಟವ ಬೆನ್ನೊಳು ಪೊತ್ತನು ರಾಮ ಕೂರ್ಮಾವತಾರಕ್ಕೆ
|| ರಾಮ ನಾಮವೆಂಬೋ ||
ಭೂಮಿಯ ಪೊತ್ತು ನೀರೊಳು ಮುಳುಗಿದ ವರಾಹವತಾರಕ್ಕೆ ||
ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದ ಸಲಹುದಕೆ ||
|| ರಾಮನಾಮವೆಂಬೋ ||
ಭೂಮಿಯದಾನವ ಬೇಡಿದ ರಾಮ ವಾಮನವತಾರಕ್ಕೆ |
ತಾಯಿಯ ಶಿರವನು ಕಡಿದನು ರಾಮ ಭಾರ್ಗವತಾರಕ್ಕೆ
|| ರಾಮ ನಾಮವೆಂಬೋ ||
ವನವಾಸವ ತಾ ಮಾಡಿದ ರಾಮ ಜನಕನ ವಾಕ್ಯಕ್ಕೆ ||
ಮಾವ ಕಂಸನ ಕೊಂದನು ಕೃಷ್ಣ ತಾಯಿಯ ಬಿಡಿಸಲಿಕೆ
|| ರಾಮ ನಾಮವೆಂಬೋ ||
ಸತಿಯರ ವ್ರತಗಳ ಕೆಡಿಸಿದ ರಾಮ ತ್ರಿಪುರ ಗೆಲುವುದಕೆ ||
ವಾಹನ ಬಿಟ್ಟು ತುರಗವನೇರಿದ ಕಲ್ಕ್ಯವತಾರಕ್ಕೆ
||ರಾಮ ನಾಮವೆಂಬೋ ||
ಶ್ಯಾಮಲ ವರ್ಣವ ತಾಳಿದ ರಾಮ ಸಮರ್ಥನು ಜಗಕೆ |
ಸ್ವಾಮಿ ಶ್ರೀ ಪುರಂದರ ವಿಠಲನು ರಾಮ ಗೋವಿಂದನು ಜಗಕೆ ||
|| ರಾಮ ನಾಮವೆಂಬೋ ||
***