ರಾಜ ಬೀದಿಯೊಳಗಿಂದ ಕಸ್ತೂರಿ ರಂಗ

ತೇಜನೇರಿ ಮೆರೆದು ಬಂದಾ

 || ಪ ||

ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ

ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು

ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು

ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ 

|| ರಾಜ ಬೀದಿಯೊಳಗಿಂದ  ||

ತಾಳ ಶಂಖ ಭೇರಿ ತಂಬೂರಿ ಮೊದಲಾದ

ಮೇಲು ಪಂಚಾನ್ಗಗಳೆಲ್ಲ ಹೊಗಳಿ ಹೊಗಳಲು

ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ

ಧೂಳಿಯನು ಎಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ  

|| ರಾಜ ಬೀದಿಯೊಳಗಿಂದ  ||

ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು

ಮೋದದಿಂದ ಗಾಯಕರು ಮೌರಿ ಪಾಡಲು

ಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾ

ಆದರದಿಂದಅಷ್ಟ ಅಮೃತಾನ್ನವ ನಿಕ್ಕುತ ಜಾಣ  

|| ರಾಜ ಬೀದಿಯೊಳಗಿಂದ  ||

ರಂಭಾ ಮೊದಲಾದ ಸುರರಮಣಿಯರು

ತುಂಬಿದಾರುತಿಯ ಪಿಡಿದು ಕೂಡಿ ಪಾಡಲು

ಶಂಭು ಮುಖ ನಿರ್ಜರನೇ ಪರಾಕೆನುತಲಿ

ಅಂಬುದಿ ಭವಾಬ್ದಿಗಳ ಆಳಿದ ಶ್ರೀರಂಗನಾಥ  

|| ರಾಜ ಬೀದಿಯೊಳಗಿಂದ  ||

ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು

ಮುಚ್ಚಿ ತಂದ ಕೆನೆ ಮೊಸರು ವೀಸಲು ಬೆಣ್ಣೆಯು

ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು

ಮೆಚ್ಚಿ ಉಂಡು ಪಾನಕ ನೀರ್ ಮಜ್ಜಿಗೆಗಳ ಸವಿದು ಬೇಗ  

|| ರಾಜ ಬೀದಿಯೊಳಗಿಂದ  ||

ಸಣ್ಣ ಮುತ್ತು ಕೆತ್ತಿಸಿದ ಸಕಲಾಧಿಗಳು

ಹೊನ್ನಹೊಸ ಜಾನ ಜಂಗುಳಿ ಹೊಳೆವ ಸೊಬಗಿನ

ಉನ್ನತಪಾರಾಯಣ ಉತ್ತಮ ರಾಜಶ್ವವೇರಿ

ಎನ್ನ ಹಯವದನರಂಗ ಎಲ್ಲರಿಗಿಷ್ಟಾರ್ಥ ಕೊಡುತ  

|| ರಾಜ ಬೀದಿಯೊಳಗಿಂದ  ||

***