ಹರಿ ಕುಣಿದಾ ನಮ್ಮ ಹರಿ ಕುಣಿದ ||
|| ಪ ||
ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿ ಕುಣಿದ ||
|| ಹರಿ ಕುಣಿದ ||
ಅಂದುಗೆ ಅರಳೆಲೆ ಬಿಂದುಲಿ ಬಾಪುರಿ
ಚೆಂದದಿ ನಲಿಯುತ ಹರಿ ಕುಣಿದ ||
|| ಹರಿ ಕುಣಿದ ||
ಅಕಳಂಕಚರಿತ ಮಕರಕುಂಡಲಧರ
ಸಕಲರ ಪಾಲಿಪ ಹರಿ ಕುಣಿದ ||
|| ಹರಿ ಕುಣಿದ ||
ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
ದಿಟ್ಟ ಮಲ್ಲರ ಗಂಡ ಹರಿ ಕುಣಿದ ||
|| ಹರಿ ಕುಣಿದ ||
ಪರಮಭಾಗವತರ ಕೇರಿಯೊಳಾಡುವ
ಪುರಂದರವಿಠಲ ಹರಿ ಕುಣಿದ ||
|| ಹರಿ ಕುಣಿದ ||