ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ|

ರಂಗನ ಎಲ್ಲಿ ನೋಡಿದಿರಿ ||ಪ||

ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೆ ||

||ಪಿಳ್ಳಂಗೋವಿಯ||

ನಂದಗೋಪನ ಮಂದಿರಂಗಳ ಸಂದು ಗೊಂದಿನಲಿ |

ಚಂದ ಚಂದದ ಗೋಪಬಾಲರ ವೃಂದ ವೃಂದದಲಿ ||

ಸುಂದರಾಂಗದ ಸುಂದರಿಯರ ಹಿಂದುಮುಂದಿನಲಿ|

ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ ||               ||೧||

||ಪಿಳ್ಳಂಗೋವಿಯ||

ಈ ಚರಾಚರದೊಳಗೆ ಅಜಾಂಡದ ಆಚೆ ಈಚೆಯಲಿ |

ಖೇಚರೆಂದ್ರ ಸುತನ ರಥದ ಅಚ್ಚ ಪೀಠದಲಿ ||

ನಾಚದೆ ಮಾಧವ ಕೇಶವನೆನ್ನುವ ವಾಚಕಂಗಳಲಿ |

ವೀಚುಕೊಂಡದ ಪುರಂದರ ವಿಠಲನ ಲೋಚನಾಗ್ರದಲಿ ||     ||೨||

||ಪಿಳ್ಳಂಗೋವಿಯ||

***