ನಿನ್ನ ಒಲುಮೆಯಿಂದ ನಿಖಿಲ ಜನರು ಬಂದು
ಮನ್ನಿಸುವರೋ ಮಹರಾಯ||
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ||
ನಿನ್ನದೇ ಸಕಲ ಸಂಪತ್ತು |
|| ನಿನ್ನ ಒಲುಮೆಯಿಂದ ||
ಜೀರ್ಣಮಲಿನ ವಸ್ತ್ರಕಾಣದ ಮನುಜಗೆ
ಪೂರ್ಣವಿಚಿತ್ರ ಸುವಸನಾ
ವರ್ಣವರ್ಣದಿಂದ ಬಾಹೋದೇನೋ
ಸಂಪೂರ್ಣ ಗುಣಾರ್ಣವ ದೇವಾ |
ಸಂಜಿ ತನಕ ಇದ್ದು ಸಣ್ಣ ಸೌಟಿನ ತುಂಬ
ಗಂಜಿ ಕಾಣದೆ ಬಳಲಿದೆನೋ ||
ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ
ಭುಂಜಿಸುವದು ಮತ್ತೇನೋ |
|| ನಿನ್ನ ಒಲುಮೆಯಿಂದ ||
ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು
ತಬ್ಬಿಬ್ಬುಗೊಂಡೇ ನಾ ಹಿಂದೇ |
ನಿಬ್ಬರ ದಿಂದಲಿ ಸರ್ವರ ಕೂಡುಂಬೊ
ಹಬ್ಬದೂಟವ ನೀನುನಿಸುವಿಯೋ |
ಮನೆ ಮನೆ ತಿರುಗಿದರೂ ಕಾಸು ಪುಟ್ಟದೆ
ಸುಮ್ಮನೆ ಚಾಲ್ವರಿದು ಬಳಲಿದೇನೋ
ಹಣಹೊನ್ನು ದ್ರವ್ಯ ಒಮ್ಮಿಂದೊಮ್ಮಿಗೆ ಈಗ
ಎನಗೆ ಪ್ರಾಪ್ತಿ ನೋಡೊ ಜೀಯಾ |
|| ನಿನ್ನ ಒಲುಮೆಯಿಂದ ||
ಮದ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ
ಮೆದ್ದೇನೆಂದರೆ ಈಯದಾದೆ |
ಈ ದರೆಯೊಳಗೆ ಸತ್ಪಾತ್ರರ ಕೂಡುಂಬೋ
ಪದ್ಧತಿ ನೋಡೋ ಧರ್ಮಾತ್ಮಾ |
ನೀಚೋಚ್ಛ ತಿಳಿಯದೆ
ಸರ್ವರ ಚರಣಕೆ ಚಾಚಿದೆ ನೊಸಲ ಹಸ್ತಗಳ |
ಯೋಚಿಸಿ ನೋಡಲು ಸೋಜಿಗವಾಗಿದೆ
ವಾಚಕೆ ನಿಲುಕದೊ ಹರಿಯೇ|
|| ನಿನ್ನ ಒಲುಮೆಯಿಂದ ||
ವೈದಿಕ ಪದವಿಯನೀವಾಗೆ ಲೌಕಿಕ
ನೈದಿಸುವದು ಬಾಳು ಖ್ಯಾತೆ|
ಮೈದುನಗೊಳಿದ ಶ್ರೀ ವಿಜಯ ವಿಠಲ ನಿನ್ನ ||
ಪಾದಸಾಕ್ಷಿಯ ಅನುಭವವೋ |
|| ನಿನ್ನ ಒಲುಮೆಯಿಂದ ||
***