ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು |
ದೋಷರಾಶಿ ನಾಶ ಮಾಡೋ ಶ್ರೀಶ ಕೇಶವ |
|| ಪ ||
ಶರಣು ಹೊಕ್ಕೆನಯ್ಯ ಎನ್ನ
ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ |
ಶೋಧಿಸೆನ್ನ ಭವದ ಕಲುಷ
ಭೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ |
ಹಿಂದನೇಕ ಯೋನಿಗಳಲಿ
ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ |
|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ||
ಭ್ರಷ್ಟನೆನಿಸಬೇಡ ಕೃಷ್ಣಾ
ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ |
ಮದನನಯ್ಯ ನಿನ್ನ ಮಹಿಮೆ
ವದನದಿಂದ ನುಡಿಯುವಂತೆ
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ |
ಕವಿದುಕೊಂಡು ಇರುವ ಪಾಪ
ಸವೆದು ಪೋಗುವಂತೆ ಮಾಡು
ಜವನ ಬಾಧೆಯನ್ನು ಬಿಡಿಸೋ ಶ್ರೀತ್ರಿವಿಕ್ರಮ |
|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು||
ಕಾಮಜನಕ ನಿನ್ನ ನಾಮ
ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ |
ಮೊದಲು ನಿನ್ನ ಪಾದಪೂಜೆ
ಒದಗುವಂತೆ ಮಾಡೋ ಎನ್ನ
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ |
ಹುಸಿಯನಾಡಿ ಹೊಟ್ಟೆ ಹೊರೆವ
ವಿಷಯದಲ್ಲಿ ರಸಿಕನೆಂದೂ
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ |
|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು||
ಕಾಮಕ್ರೋಧ ಬಿಡಿಸಿ ನಿನ್ನ
ನಾಮ ಜಿಹ್ವೆಯೊಳಗೆ ನುಡಿಸೋ
ಶ್ರೀಮಹಾನುಭಾವನಾದ ದಾಮೋದರ |
ಬಿದ್ದು ಭವದನೇಕ ಜನುಮ
ಬದ್ದನಾಗಿ ಕಲುಷದಿಂದ
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೇ |
ಪಂಕಜಾಕ್ಷ ನೀನು ಎನ್ನ
ಮಂಕಬುದ್ಧಿಯನ್ನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ |
|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ||
ಏಸು ಜನ್ಮ ಬಂದರೇನು
ದಾಸನಲ್ಲವೇನು ನಾನು
ಘಾಸಿ ಮಾಡದಿರು ಇನ್ನು ವಾಸುದೇವನೇ |
ಬುದ್ಧಿ ಶೂನ್ಯನಾಗಿ ಎನ್ನ
ಬದ್ಧಕಾಯ ಕುಹಕ ಮನವ
ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ |
ಜನನಿ ಜನಕ ನೀನೇ ಎಂದು
ನೆನೆವೆನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ |
|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ||
ಹರುಷದಿಂದ ನಿನ್ನ ನಾಮ
ಸ್ಮರಿಸುವಂತೆ ಮಾಡು ಕ್ಷೇಮ
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ |
ಸಾಧುಸಂಗ ಕೊಟ್ಟು ನಿನ್ನ
ಪಾದಭಜನೆ ಇತ್ತು ಎನ್ನ
ಭೇದಮಾಡಿ ನೋಡದಿರೊ ಹೇ ಅಧೋಕ್ಷಜ |
ಚಾರುಚರಣ ತೋರಿ ಎನಗೆ
ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ ನಾರಸಿಂಹನೇ |
ಸಂಚಿತಾದಿ ಪಾಪಗಳು
ಕಿಂಚಿತಾದ ಪೀಡೆಗಳು
ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ |
|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ||
ಜ್ಞಾನ ಭಕುತಿ ಕೊಟ್ಟು ನಿನ್ನ
ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ |
ಜಪತಪಾನುಷ್ಠಾನವಿಲ್ಲ
ಕುಪಥಗಾಮಿಯಾದ ಎನ್ನ
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ |
ಮೊರೆಯ ಇಡುವೆನಯ್ಯ ನಿನಗೆ
ಶರಧಿಶಯನ ಶುಭಮತಿಯ
ಇರಿಸೋ ಭಕ್ತರೊಳು ಪರಮಪುರುಷ ಶ್ರೀಹರೇ |
|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ||
ಪುಟ್ಟಿಸಲೇಬೇಡ ಇನ್ನು
ಪುಟ್ಟಿಸಿದಕೆ ಪಾಲಿಸಿನ್ನು ||
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ |
ಸತ್ಯವಾದ ನಾಮಗಳನು
ನಿತ್ಯದಲ್ಲಿ ಪಠಿಸುವರಿಗೆ
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ |
ಮರೆಯದೆಲೆ ಹರಿಯ ನಾಮ
ಬರೆದು ಓದಿ ಪೇಳುವರಿಗೆ
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ |
|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು||
***