ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನ್ನುತಲಿದ್ದೆ ||
ದೃಷ್ಟಿಯಿಂದಲಿ ನಾನು ಕಂಡೆ ||
ಸೃಷ್ಟಿಗೀಶನೇ ಶ್ರೀರಂಗಶಾಯಿ
||ಪ||
ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನ್ನುತಲಿದ್ದೆ ||
ದೃಷ್ಟಿಯಿಂದಲಿ ನಾನು ಕಂಡೇ
|| ಅ. ಪ ||
ಎಂಟು ಏಳನು ಕಳೆದುದರಿಂದೇ
ಬಂಟರೈವರ ತುಳಿದುದರಿಂದೇ
ತುಂಟಕನೊಬ್ಬನ ತರಿದುದರಿಂದೇ
ಬಂಟನಾಗಿ ಬಂದೆನೋ ಶ್ರೀರಂಗಶಾಯಿ ||
|| ಇಷ್ಟು ದಿನ ಈ ||
ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||
|| ಇಷ್ಟು ದಿನ ಈ ||
ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||
|| ಇಷ್ಟು ದಿನ ಈ ||
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿ ಕೇಶವನ ನಾ ಕಂಡೆ ||
|| ಇಷ್ಟು ದಿನ ಈ ||
***