ಪವಮಾನ ಪವಮಾನ |

ಪವಮಾನ ಜಗದ ಪ್ರಾಣಾ ||

ಸಂಕರುಷಣ ಭವಭಯಾರಣ್ಯ ದಹನಾ.. ದಹನ |ಪ|

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಜನಪ್ರಿಯ 

||ಪವಮಾನ||

ಹೇಮ ಕಚ್ಚುಟ ಉಪವೀತ  ಧರಿಪ ಮಾರುತ |

ಕಾಮಾದಿ ವರ್ಗ ರಹಿತಾ ||

ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ |

ರಾಮಚಂದ್ರನ ನಿಜದೂತ ||

ಯಾಮ ಯಾಮಕೆ ನಿನ್ನಾರಾಧಿಪುದಕೆ

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ |

ಈ ಮನಸಿಗೆ ಸುಖಸೋಮವ ತೋರುತ

ಪಾಮರ ಮತಿಯನು ನೀ ಮಾಣಿಪುದು  

||ಪವಮಾನ||

ವಜ್ರ ಶರೀರ ಗಂಭೀರ ಮುಕುಟಧರ |

ದುರ್ಜನವನ ಕುಠಾರ  ||

ನಿರ್ಜರ ಮಣಿದಯಪಾರ  ವಾರಉದಾರ |

ಸಜ್ಜನರಘ ಪರಿಹಾರ ||

ಅರ್ಜುನಗೊಲಿದಂದು ಧ್ವಜವಾನಿಸಿನಿಂದು

ಮೂರ್ ಜಗವರಿವಂತೆ ಗರ್ಜನೆ ಮಾಡಿದೆ |

ಹೆಜ್ಜೆಹೆಜ್ಜೆಗೆ ನಿನ್ನಬ್ಜಪದದಧೂಳಿ

ಮಜ್ಜನದಲಿ ಭವ ವರ್ಜಿತವೆನಿಸೊ | 

||ಪವಮಾನ||

ಪ್ರಾಣಾಪಾನ ವ್ಯಾನ ಉದಾನ ಸಮಾನಾ|

ಆನಂದ ಭಾರತಿ ರಮಣಾ ||

ನೀನೆ ಶರ್ವಾದಿ ಗೀರ್ವಾಣಾ ದ್ಯಮರರಿಗೆ 

ಜ್ಞಾನಧನ ಪಾಲಿಪವರೇಣ್ಯ ||

ನಾನು ನಿರುತದಲಿ ಏನೇನೆಸಗುವೆ 

ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ |

ಪ್ರಾಣನಾಥ ಸಿರಿವಿಜಯವಿಠಲನ

ಕಾಣಿಸಿ ಕೊಡುವದು ಭಾನುಪ್ರಕಾಶ | 

||ಪವಮಾನ||

***