ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ ||
ನಿನ್ನಂತಾಗದೆ ನನ್ನವನಾಗನೆ
ನಿನ್ನ ಪ್ರಭು ಶ್ರೀರಾಮ
ನಿನ್ನ ಪ್ರಭು ಶ್ರೀರಾಮ
|| ಪ ||
ಎಟುಕದ ಹಣ್ಣನೆ ನಾ ತರಲಾರೆ
ಮೇಲಕ್ಕೆ ಎಗರಿ ಹನುಮ ||
ಸೂರ್ಯನ ಹಿಡಿವ ಸಾಹಸಕ್ಕಿಳಿದರೆ
ಆ ಕ್ಷಣ ನಾ ನಿರ್ನಾಮ ||
|| ನಿನ್ನಂತೆ ನಾನಾಗಲಾರೆ ||
ಹಾದಿಯ ಹಳ್ಳವೆ ದಾಟಲಸಾಧ್ಯ
ಹೀಗಿರುವಾಗ ಹನುಮ ||
ಸಾಗರ ದಾಟುವ ಹಂಬಲ ಸಾಧ್ಯವೆ
ಅಯ್ಯೋ ರಾಮ ರಾಮ ||
|| ನಿನ್ನಂತೆ ನಾನಾಗಲಾರೆ ||
ಜಗಳವ ಕಂಡರೆ ಓಡುವೆ ದೂರ
ಎದೆಯಲಿ ಡವ ಡವ ಹನುಮ ||
ರಕ್ಕಸರ ನಾ ಕನಸಲಿ ಕಂಡರೂ
ಬದುಕಿಗೆ ಪೂರ್ಣ ವಿರಾಮ ||
|| ನಿನ್ನಂತೆ ನಾನಾಗಲಾರೆ ||
ಅಟ್ಟವ ಹತ್ತಲು ಶಕ್ತಿಯು ಇಲ್ಲ
ಇಂಥ ದೇಹವು ಹನುಮ ||
ಬೆಟ್ಟವನೆತ್ತುವೆನೆಂದರೆ ಎನ್ನನು
ನಂಬುವನೇ ಶ್ರೀರಾಮ ||
|| ನಿನ್ನಂತೆ ನಾನಾಗಲಾರೆ ||
ಕನಸಲು ಮನಸಲು ನಿನ್ನ ಉಸಿರಲು
ತುಂಬಿದೆ ರಾಮನ ನಾಮ ||
ಚಂಚಲವಾದ ನನ್ನೀಮನದಲಿ
ನಿಲ್ಲುವರಾರೋ ಹನುಮ ||
|| ನಿನ್ನಂತೆ ನಾನಾಗಲಾರೆ ||
ಭಕ್ತಿಯು ಇಲ್ಲ ಶಕ್ತಿಯು
ಇಲ್ಲ ಹುಟ್ಟಿದೆ ಏತಕೋ ಕಾಣೆ ||
ನೀ ಕೃಪೆಮಾಡದೆ ಹೋದರೆ
ಹನುಮ ನಿನ್ನ ರಾಮನ ಆಣೆ ||
|| ನಿನ್ನಂತೆ ನಾನಾಗಲಾರೆ ||
***